ಏನ್ ಮಗ..... ಹೆಂಗೈತೆ ಜೀವನ...???

ಯಾಕೋ ಇತ್ತೀಚಿಗೆ ಯಾರನ್ನಾದರು "ಹೇಗಿದೆ ಜೀವನ" ಅಂತ ಕೇಳಬೇಕೆಂದರೆ ಹಿಂಸೆ ಆಗುತ್ತೆ, ಬೇರೆ ಯಾರನ್ನು ಯಾಕೆ ನನ್ನನ್ನೇ ಯಾರದ್ರು 'ಏನ್ ಮಗ ಹೆಂಗೈತೆ ಜೀವನ' ಅಂದ್ರೆ ಏನು ಹೇಳಬೇಕೆಂದು ಗೊತ್ತಾಗದೆ ಏನೋ ಹೇಳಿ ಬಿಟ್ಟಿರ್ತೀನಿ. ನನಗೆ ಸಿಗುವ ಉತ್ತರಗಳು ಕೂಡಾ ಹಾಗೆ ಇರುತ್ತವೆ, 'ಅಯ್ಯೋ ಬಿಟ್ಟಾಕು....' 'ಅದೇ ಜೀವನ ಲೋ... ' 'ಮಾಮೂಲು ಅದೇ ಕೆಲಸ....' ಏನು ಚೇಂಜಸ್ ಇಲ್ಲಾ ಲೋ..' ಇಷ್ಟೊಂದು ಬೇಜಾರು ಆಗಿರಬೇಕಾದ್ರೆ ಏನಾದ್ರು ಘನಂದಾರಿ ಕಾರಣ ಇರಲೇ ಬೇಕೆಂದು ಹುಡುಕಲು ಹೊರಟರೆ ಸಿಗುವ ಕಾರಣಗಳು ಎಂಥವು.... ಪ್ರಾಜೆಕ್ಟ್ ನಡೀತಾ ಇಲ್ಲಾ, ಬಾಸ್ ಮುಖ ಇಷ್ಟ ಆಗ್ತಾ ಇಲ್ಲಾ, ಗರ್ಲ್ ಫ್ರೆಂಡ್ ಕಿರಿಕಿರಿ....ಇನ್ನು ಮದುವೆ ಅದೊವ್ರುದ್ದು ಇನ್ನೊಂದು ಗೋಳು, ಎಲ್ಲಾ ಮುಗಿದು ಜೀವನದಲ್ಲಿ ಇನ್ನೇನು ಉಳಿದಿಲ್ಲ ಅನ್ನೋಹಾಗೆ ಮಾತಾಡ್ತಾ ಇರ್ತಾರೆ.... ಇಂಥ ಚಿಕ್ಕ-ಚಿಕ್ಕ ಸಮಸ್ಯೆಗಳಿಗೆ ನಾವು ಜೀವನವೇ ಮುಗಿದ ಹಾಗೆ ಮಾತಾಡ್ತಾ ಇದ್ದೀವಾ.... ಏನಾಗಿದೆ ನಮಗೆಲ್ಲಾ.....

ಅಷ್ಟಕ್ಕೂ ಇಷ್ಟೆಲ್ಲಾ ಯೋಚನೆ ಶುರು ಆಗಿದ್ದು ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತನನ್ನು ನೋಡಲು ಆಸ್ಪತ್ರೆ ಗೆ ಹೋದಾಗ. ಇರುವ ನನ್ನ ಸ್ನೇಹಿತರಲೆಲ್ಲಾ ಆರೋಗ್ಯ ಮನುಷ್ಯ ಅಂದ್ರೆ ಅವನೇ... ಅದು ಅಲ್ಲದೆ ವರುಷಕ್ಕೊಂದು ಸತಿ ಹಂಗೇರಿಯಲ್ಲಿ ನಡೆಯುವ 100 ಕಿ.ಮಿ. ನಡಿಕೆ ಕೂಟದಲ್ಲಿ ಭಾಗವಹಿಸಿ 102 ಕಿ.ಮಿ. ನಡಿಗೆಯನ್ನು 22 ಘಂಟೆಗಳಲ್ಲಿ ಕ್ರಮಿಸಿ ಕೆಲವು ದಿನಗಳ ಹಿಂದಷ್ಟೇ ಹಿಂದುರುಗಿದ್ದ. ಅಂತವನು ಆಸ್ಪತ್ರೆ ಸೇರಿದ್ದನಾಂದ್ರೆ ಎಂತವರಿಗೂ ಆಶ್ಚರ್ಯ ಆಗೇ ಆಗುತ್ತೆ. ಅಲ್ಲಿ ಹೋಗಿ ನೋಡಿದರೆ ತುಂಬಾ ವಿಚಿತ್ರ ಕಾಯಿಲೆ ಯಿಂದ ನರಳುತ್ತಿದ್ದ, ಅದನ್ನು ಕಾಯಿಲೆ ಅಂಥ ಕೂಡ ಹೇಳುವುದಕ್ಕಾಗುವುದಿಲ್ಲ, ಇದು ಒಂಥರಾ ವಿಚಿತ್ರ symptom, ಇದ್ದಕಿದ್ದ ಹಾಗೆ ಅವನ ಒಂದು ಕಿವಿಯಲ್ಲಿ ಗುಂಯ್...ಅನ್ನುವ ಒಂದು ರೀತಿಯ background noise ಶುರು ಆಗಿದೆ.... ಅದು ನಿಂತ ತಕ್ಷಣ ಅವನ ಕಿವಿಗೆ ಬೀಳುವ ಪ್ರತಿಯೊಂದು ಶಬ್ದ ಎರಡೆರಡು ಸಾರಿ repeat ಆಗ್ತಾ ಇತ್ತಂತೆ. ಇಂಥ ಕಾಯಿಲೆ ನಾನು ಕೇಳಿದ್ದು ಇದೇ ಮೊದಲು, ಸುಮ್ಮನೆ ನಮ್ಮ ಸುತ್ತ ಮುತ್ತಲ್ಲಿನ ಶಬ್ದ ಗಳೆಲ್ಲಾ ಎರಡೆರಡು ಸಾರಿ ರಿಪೀಟ್ ಆಗ್ತಾಯಿದೆ ಅಂತಾ ಯೋಚಿಸಿದರೆನೆ ಮೈ ಎಲ್ಲಾ ಬೆವರುತ್ತೆ, ಜೊತೆಗೆ ತಲೆ ಒಳಗಡೆ ಯಾರೋ speakers ಇಟ್ಟ ಹಾಗೆ ಗುಂಯ್.... ಅನ್ನುವ background noise. ನನ್ನ ಸ್ನೇಹಿತನಿಗೆ ಏನು ಅಂತ ಹೇಳಲಿ, ಯಾವುದೊ ಗಾಯ ಆಗಿದ್ದರೆ ಬೇಗ ವಾಸಿ ಆಗುತ್ತೆ ಬಿಡು ಅನ್ನ ಬಹುದು, ಅಥವಾ ನೋವು ಇದ್ದರೆ ಸುಮ್ಮನೆ pain killer ಅಥವಾ sleeping tablet ತಗೊಂಡು ಮಲಗು ಅನ್ನ ಬಹುದು. ಇಂಥ ಕಾಯಿಲೆಗೆ ಏನು ಅಂಥ ಹೇಳೋದು?..... ನಿಜ ಹೇಳಬೇಕೆಂದರೆ ಚಿಕ್ಕಂದಿನಿಂದ ಓದಿದ್ದ "ಆರೋಗ್ಯವೇ ಭಾಗ್ಯ"... ಎಂಬ ಚಿಕ್ಕ ವಾಕ್ಯ ನಿಜವಾಗಲು ಅರ್ಥ ಆಗಿದ್ದು ಅವತ್ತು ಆಸ್ಪತ್ರೆಯಿಂದ ಹಿಂದಿರುಗ ಬೇಕಾದರೆ..... ಅದು ಬರೋಬರಿ 28 ವರ್ಷಗಳ ನಂತರ.

ಯಾವುದೋ ಸಣ್ಣ experiment, ತಲೆಬುರುಡೆ ಇಲ್ಲದ project, ಕಾಟ ಕೊಡುವ boss, ಪಕ್ಕದಲ್ಲಿ ಇದ್ದು ಇಲ್ಲದಂತಿರುವ girl friend, ಇಷ್ಟವಿಲ್ಲದೆ ಕಷ್ಟ ಪಟ್ಟು ತಿನ್ನು ರಾತ್ರಿಯ Dinner.... ಹೀಗೆ ಹಾಳು-ಮುಳು ಅರ್ಥ ವಿಲ್ಲದ ವಿಷಯಗಳಿಗೆ ಕೊರಗುವ ನಾವು, ಇವತ್ತು ಏನು ಕಾಯಿಲೆ ಇಲ್ಲದೆ ಆರೋಗ್ಯವಾಗಿದ್ದೇನೆ ಅಂಥ ಯಾಕೆ ಖುಷಿ ಪಡಬಾರದು? .... ಯಾರಿಗೊತ್ತು ಯಾವಾಗ ಕಿವಿ..ಕೈ... ಬಾಯಿ ....ತಲೆ...(ಇನ್ನು ಏನೇನೋ) ಕೆಲಸ ಮಾಡೋದು ನಿಲ್ಸುತ್ತೋ ಯಾರಿಗೊತ್ತು.... ಮುಂದೆ ಯಾರದ್ರು "ಹೇಗಿದೆ ಜೀವನ?" ಅಂಥ ಕೇಳಿದರೆ "ಚೆನ್ನಾಗಿದ್ದೀನಿ" ಅಂಥ ಬಾಯಿ ತುಂಬಾ ಹೇಳೋ ಅವಕಾಶನು ಇಲ್ದಲೇನೆ ಹೋಗ ಬಹುದು,

ಅಲ್ಲಿವರೆಗಾದ್ರು "ಸಕತ್ ಮಗ..........." ಅನ್ನೋಕೆ ನಾವೇನಾದ್ರು ಕಳ್ಕೊತಿವ?....

No comments: