ಅದೆಲ್ಲೋ ನನ್ನ ಗೆಳತಿಗೆ ಈ ಬ್ಲಾಗ್ ಕಣ್ಣಿಗೆ ಬಿದ್ದಿದೆ, ಓದಿದ ತಕ್ಷಣ ನಂಗೊಂದು ಮೆಸೇಜ್ ಕಳುಹಿಸಿದ್ದಳು, "ನೀನ್ಯಾವಗ್ಲೋ ಲವ್- ಗಿವ್ ಅನ್ನೋಕೆ ಶುರು ಮಾಡಿದೆ"? ಅಂತ ... ಅದಕ್ಕೆ ನಾನು ಅವಳಿಗೆ ಬರೆದ್ದಿದೇನೆ..."ಜೀವನ ಬದುಕೊದನ್ನ ಕಲಿಸುತ್ತೆ, ಪ್ರೀತಿ ಮೌನನ ಕಲಿಸುತ್ತೆ...... ಈ ಎರಡರ ಅನುಭವ ಇಲ್ದಲೇ ಇರೋ ನನ್ನಂತ ದಡ್ಡರು ಬ್ಲಾಗ್-ಗೀಗು ಅಂತ ಬಾಯಿ ಬಡ್ಕೊತಿರ್ತಾರೆ"....... ನಾನು ಅವಳಿಗೆ ಹೇಳಿದ್ದು ಸರೀತಾನೆ?....
"ಹೇಳಿ ಕೇಳಿ ಮೊದಲೇ ಚೂರು ಪಾಪಿ ನಾನು"... ಎಂದವರಿಗೆ ಒಂದು ಸಲಾಮ್ ಹೊಡೆಯುತ್ತಾ...!!!
ಯಾವುದಾದರು ಕನ್ನಡ ಹಾಡು ಕೇಳೋಣ ಅಂದ ತಕ್ಷಣ, ಕೈ ಗೆ "old kannada songs" ಸಿಡಿ ಬಂದಿರುತ್ತೆ. ಯಾವುದಾದರು ಹೊಸ ಹಾಡು ಗುನುಗೋಣ ಅಂದ್ರೆ... ಹುಂಹೂ ಜಪ್ಪಯ್ಯ ಅಂದ್ರು ಒಂದು ಲೈನ್ ಆಚಗೆ ಯಾವ ಹಾಡು ದಾಟಲ್ಲ. ಅದೇನಪ್ಪ ನಮ್ಮ ಜಮಾನದ್ದು ಹಾಡುಗಳ ಹಣೆಬರನೆ ಅಷ್ಟೋ ಅಥವಾ ನಂಗೆ ರುಚಿ ಇಲ್ವೋ... ಇತ್ತೇಚೆಗೆ ಒಳ್ಳೆ ಹಾಡುಗಳು ಬಂದಿಲ್ಲ ಅಂತಲ್ಲ... "ಈ ಭೂಮಿ ಬಣ್ಣದ ಭುಗುರಿ"..... "ನೂರು ಜನ್ಮಕು" ಹೀಗೆ ಅಲ್ಲೊಂದು ಇಲ್ಲೊಂದು, ಅದು ಬಿಟ್ರೆ ಹೆಚ್ಚಿನ ಹಾಡುಗಳೆಲ್ಲ ಬಳಕುವ ಸೊಂಟಕ್ಕೋ, ಸೀರೆ ಸಂದಿಯಲ್ಲಿ ಇಣುಕುವ ಹೊಕ್ಕಳಕ್ಕೋ ಅಥವಾ ತುಂಬಿದೆದೆಗೆ ಮೀಸಲು, ಇಂಥ ಹಾಡುಗಳನ್ನು ಎಷ್ಟು ಅಂತಾ ಕೇಳೋದು?. ಬೆಂಗಳುರಿನಲ್ಲಿದ್ದಾಗ ಹಂಗು-ಇಂಗು ರೇಡಿಯೋದಲ್ಲಿ ಅಲ್ಪ ಸ್ವಲ್ಪ ಕನ್ನಡ ಹಾಡದ್ರು ಕೇಳ್ತಾ ಇದ್ದೆ, ದೇಶ ಬಿಟ್ಟು ಬಂದ ಮೇಲೆ ಅದು ಬಿಟ್ಟೋಯ್ತು.
ಇದ್ದಕಿದ್ದ ಹಾಗೆ ಒಂದು ದಿನ "ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ" ಅನ್ನೋ ಲೈನ್ ಕಿವಿ ಗೆ ಬಿತ್ತು.... ಯಾರೋ ಇದು ಬರೆದಿರೋದು ಅಂತ ತಮ್ಮನ ವಿಚಾರಿಸಿದಕ್ಕೆ, ಜಯಂತ್ ಕೈಕಿಣಿ ಅವರ ವಿವರ ಕೊಟ್ಟಿದ್ದು ಅಲ್ದಲ್ಲೇ "ಮುಂಗಾರು ಮಳೆ" ಚಿತ್ರದ ಎಲ್ಲಾ ಹಾಡುಗಳ ಒಂದು ಪಿಡಿಫ್ ಫೈಲೇ ಕಳಿಸಿದ್ದ. ಈಗ ಕೆಲವು ೫ ವರ್ಷಗಳ ಕೆಳಗೆ ಯಾರದ್ರು ಯುವಕರು ಅದರಲ್ಲೂ ಸಾಫ್ಟ್ ವೆರು ಹುಡುಗರು ಐಪಾಡ್ ನಲ್ಲಿ ಕನ್ನಡ ಹಾಡು ಕೇಳುತ್ತಾ, ಒಬ್ಬರಿಗೊಬ್ಬರು ಹಾಡುಗಳ ಸಾಹಿತ್ಯನ forward ಮಾಡ್ಕೊತಾರೆ ಅಂತ ಹೇಳಿದ್ರೆ ನಾನು ನಂಬ್ತಿರಲಿಲ್ಲ, ಆದ್ರೆ thanks to this man..... ಎಲ್ಲಾ ಬದಲಾಗಿದೆ.
ಜಯಂತ್ ಕೈಕಿಣಿ ಅವರ "ರಸ ಋಷಿಗೆ ನಮನ" ಎಂಬ ಕಾರ್ಯಕ್ರಮ ನೋಡಿದ್ದು ಬಿಟ್ರೆ ಅವರ ಬಗ್ಗೆ ಆಗಲೀ ಅವರ ಸಾಹಿತ್ಯದ ಬಗ್ಗೆ ಆಗಲೀ ನಂಗೆ ಹೆಚ್ಚು ಗೊತ್ತಿರ್ಲಿಲ್ಲ. ಆದರೆ ಈಗ ಹಾಡುಗಳನ್ನೆಲ್ಲಾ ಕೇಳಿದ ಮೇಲೆ ಅವರ "ತೂಫಾನ್ ಮೇಲ್" "ಬೊಗಸೆಯ ಮಳೆಯಲ್ಲಿ" ಓದಬೇಕೆಂಬ ಆಸೆ ಶುರುವಾಗಿದೆ. ಅದು ನಿಜ ಆಗ ಬೇಕೆಂದರೆ ನಾನು ಇಂಡಿಯಾ ಗೆ ವಾಪಸ್ಸು ಹೋಗಬೇಕು.... ಅಲ್ಲಿ ವರೆಗೂ ..
"ಹಣೆಯಲ್ಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ" ....
"ಮಿಂಚಾಗಿ ನೀನು ಬರಲು, ನಿಂತಲ್ಲಿಯೇ ಮಳೆಗಾಲ"...
"ಮಳೆ ನಿಂತು ಹೋದ ಮೇಲೆ, ಹನಿಯೊಂದು ಮೂಡಿದೆ"....
ಇಂತ ಲೈನ್ ಗಳು ಸಾಕು .....
ಕನ್ನಡ ಚಲನ ಚಿತ್ರ ಸಾಹಿತ್ಯಕ್ಕೆ ಹೊಸ ರೂಪ ಕೊಟ್ಟಿದಕ್ಕೆ, ಅದರಲ್ಲೂ ನಮ್ಮಂತ ಯುವಕರಿಗೆ ಸಾಹಿತ್ಯದ ಹುಚ್ಚು ಹಿಡಿಸಿದಕ್ಕೆ ... ಜಯಂತ್ ಕೈಕಿಣಿ ಸರ್...ನಿಮಗೊಂದು ಸಲ್ಯೂಟ್ ....ನಾವೆಲ್ಲ ನಿಮಗೆ ಋಣಿ...
"ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದು ಎನ್ನ ಬಹುದೇ".....
ಏನ್ ಮಗ..... ಹೆಂಗೈತೆ ಜೀವನ...???
ಯಾಕೋ ಇತ್ತೀಚಿಗೆ ಯಾರನ್ನಾದರು "ಹೇಗಿದೆ ಜೀವನ" ಅಂತ ಕೇಳಬೇಕೆಂದರೆ ಹಿಂಸೆ ಆಗುತ್ತೆ, ಬೇರೆ ಯಾರನ್ನು ಯಾಕೆ ನನ್ನನ್ನೇ ಯಾರದ್ರು 'ಏನ್ ಮಗ ಹೆಂಗೈತೆ ಜೀವನ' ಅಂದ್ರೆ ಏನು ಹೇಳಬೇಕೆಂದು ಗೊತ್ತಾಗದೆ ಏನೋ ಹೇಳಿ ಬಿಟ್ಟಿರ್ತೀನಿ. ನನಗೆ ಸಿಗುವ ಉತ್ತರಗಳು ಕೂಡಾ ಹಾಗೆ ಇರುತ್ತವೆ, 'ಅಯ್ಯೋ ಬಿಟ್ಟಾಕು....' 'ಅದೇ ಜೀವನ ಲೋ... ' 'ಮಾಮೂಲು ಅದೇ ಕೆಲಸ....' ಏನು ಚೇಂಜಸ್ ಇಲ್ಲಾ ಲೋ..' ಇಷ್ಟೊಂದು ಬೇಜಾರು ಆಗಿರಬೇಕಾದ್ರೆ ಏನಾದ್ರು ಘನಂದಾರಿ ಕಾರಣ ಇರಲೇ ಬೇಕೆಂದು ಹುಡುಕಲು ಹೊರಟರೆ ಸಿಗುವ ಕಾರಣಗಳು ಎಂಥವು.... ಪ್ರಾಜೆಕ್ಟ್ ನಡೀತಾ ಇಲ್ಲಾ, ಬಾಸ್ ಮುಖ ಇಷ್ಟ ಆಗ್ತಾ ಇಲ್ಲಾ, ಗರ್ಲ್ ಫ್ರೆಂಡ್ ಕಿರಿಕಿರಿ....ಇನ್ನು ಮದುವೆ ಅದೊವ್ರುದ್ದು ಇನ್ನೊಂದು ಗೋಳು, ಎಲ್ಲಾ ಮುಗಿದು ಜೀವನದಲ್ಲಿ ಇನ್ನೇನು ಉಳಿದಿಲ್ಲ ಅನ್ನೋಹಾಗೆ ಮಾತಾಡ್ತಾ ಇರ್ತಾರೆ.... ಇಂಥ ಚಿಕ್ಕ-ಚಿಕ್ಕ ಸಮಸ್ಯೆಗಳಿಗೆ ನಾವು ಜೀವನವೇ ಮುಗಿದ ಹಾಗೆ ಮಾತಾಡ್ತಾ ಇದ್ದೀವಾ.... ಏನಾಗಿದೆ ನಮಗೆಲ್ಲಾ.....
ಅಷ್ಟಕ್ಕೂ ಇಷ್ಟೆಲ್ಲಾ ಯೋಚನೆ ಶುರು ಆಗಿದ್ದು ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತನನ್ನು ನೋಡಲು ಆಸ್ಪತ್ರೆ ಗೆ ಹೋದಾಗ. ಇರುವ ನನ್ನ ಸ್ನೇಹಿತರಲೆಲ್ಲಾ ಆರೋಗ್ಯ ಮನುಷ್ಯ ಅಂದ್ರೆ ಅವನೇ... ಅದು ಅಲ್ಲದೆ ವರುಷಕ್ಕೊಂದು ಸತಿ ಹಂಗೇರಿಯಲ್ಲಿ ನಡೆಯುವ 100 ಕಿ.ಮಿ. ನಡಿಕೆ ಕೂಟದಲ್ಲಿ ಭಾಗವಹಿಸಿ 102 ಕಿ.ಮಿ. ನಡಿಗೆಯನ್ನು 22 ಘಂಟೆಗಳಲ್ಲಿ ಕ್ರಮಿಸಿ ಕೆಲವು ದಿನಗಳ ಹಿಂದಷ್ಟೇ ಹಿಂದುರುಗಿದ್ದ. ಅಂತವನು ಆಸ್ಪತ್ರೆ ಸೇರಿದ್ದನಾಂದ್ರೆ ಎಂತವರಿಗೂ ಆಶ್ಚರ್ಯ ಆಗೇ ಆಗುತ್ತೆ. ಅಲ್ಲಿ ಹೋಗಿ ನೋಡಿದರೆ ತುಂಬಾ ವಿಚಿತ್ರ ಕಾಯಿಲೆ ಯಿಂದ ನರಳುತ್ತಿದ್ದ, ಅದನ್ನು ಕಾಯಿಲೆ ಅಂಥ ಕೂಡ ಹೇಳುವುದಕ್ಕಾಗುವುದಿಲ್ಲ, ಇದು ಒಂಥರಾ ವಿಚಿತ್ರ symptom, ಇದ್ದಕಿದ್ದ ಹಾಗೆ ಅವನ ಒಂದು ಕಿವಿಯಲ್ಲಿ ಗುಂಯ್...ಅನ್ನುವ ಒಂದು ರೀತಿಯ background noise ಶುರು ಆಗಿದೆ.... ಅದು ನಿಂತ ತಕ್ಷಣ ಅವನ ಕಿವಿಗೆ ಬೀಳುವ ಪ್ರತಿಯೊಂದು ಶಬ್ದ ಎರಡೆರಡು ಸಾರಿ repeat ಆಗ್ತಾ ಇತ್ತಂತೆ. ಇಂಥ ಕಾಯಿಲೆ ನಾನು ಕೇಳಿದ್ದು ಇದೇ ಮೊದಲು, ಸುಮ್ಮನೆ ನಮ್ಮ ಸುತ್ತ ಮುತ್ತಲ್ಲಿನ ಶಬ್ದ ಗಳೆಲ್ಲಾ ಎರಡೆರಡು ಸಾರಿ ರಿಪೀಟ್ ಆಗ್ತಾಯಿದೆ ಅಂತಾ ಯೋಚಿಸಿದರೆನೆ ಮೈ ಎಲ್ಲಾ ಬೆವರುತ್ತೆ, ಜೊತೆಗೆ ತಲೆ ಒಳಗಡೆ ಯಾರೋ speakers ಇಟ್ಟ ಹಾಗೆ ಗುಂಯ್.... ಅನ್ನುವ background noise. ನನ್ನ ಸ್ನೇಹಿತನಿಗೆ ಏನು ಅಂತ ಹೇಳಲಿ, ಯಾವುದೊ ಗಾಯ ಆಗಿದ್ದರೆ ಬೇಗ ವಾಸಿ ಆಗುತ್ತೆ ಬಿಡು ಅನ್ನ ಬಹುದು, ಅಥವಾ ನೋವು ಇದ್ದರೆ ಸುಮ್ಮನೆ pain killer ಅಥವಾ sleeping tablet ತಗೊಂಡು ಮಲಗು ಅನ್ನ ಬಹುದು. ಇಂಥ ಕಾಯಿಲೆಗೆ ಏನು ಅಂಥ ಹೇಳೋದು?..... ನಿಜ ಹೇಳಬೇಕೆಂದರೆ ಚಿಕ್ಕಂದಿನಿಂದ ಓದಿದ್ದ "ಆರೋಗ್ಯವೇ ಭಾಗ್ಯ"... ಎಂಬ ಚಿಕ್ಕ ವಾಕ್ಯ ನಿಜವಾಗಲು ಅರ್ಥ ಆಗಿದ್ದು ಅವತ್ತು ಆಸ್ಪತ್ರೆಯಿಂದ ಹಿಂದಿರುಗ ಬೇಕಾದರೆ..... ಅದು ಬರೋಬರಿ 28 ವರ್ಷಗಳ ನಂತರ.
ಯಾವುದೋ ಸಣ್ಣ experiment, ತಲೆಬುರುಡೆ ಇಲ್ಲದ project, ಕಾಟ ಕೊಡುವ boss, ಪಕ್ಕದಲ್ಲಿ ಇದ್ದು ಇಲ್ಲದಂತಿರುವ girl friend, ಇಷ್ಟವಿಲ್ಲದೆ ಕಷ್ಟ ಪಟ್ಟು ತಿನ್ನು ರಾತ್ರಿಯ Dinner.... ಹೀಗೆ ಹಾಳು-ಮುಳು ಅರ್ಥ ವಿಲ್ಲದ ವಿಷಯಗಳಿಗೆ ಕೊರಗುವ ನಾವು, ಇವತ್ತು ಏನು ಕಾಯಿಲೆ ಇಲ್ಲದೆ ಆರೋಗ್ಯವಾಗಿದ್ದೇನೆ ಅಂಥ ಯಾಕೆ ಖುಷಿ ಪಡಬಾರದು? .... ಯಾರಿಗೊತ್ತು ಯಾವಾಗ ಕಿವಿ..ಕೈ... ಬಾಯಿ ....ತಲೆ...(ಇನ್ನು ಏನೇನೋ) ಕೆಲಸ ಮಾಡೋದು ನಿಲ್ಸುತ್ತೋ ಯಾರಿಗೊತ್ತು.... ಮುಂದೆ ಯಾರದ್ರು "ಹೇಗಿದೆ ಜೀವನ?" ಅಂಥ ಕೇಳಿದರೆ "ಚೆನ್ನಾಗಿದ್ದೀನಿ" ಅಂಥ ಬಾಯಿ ತುಂಬಾ ಹೇಳೋ ಅವಕಾಶನು ಇಲ್ದಲೇನೆ ಹೋಗ ಬಹುದು,
ಅಲ್ಲಿವರೆಗಾದ್ರು "ಸಕತ್ ಮಗ..........." ಅನ್ನೋಕೆ ನಾವೇನಾದ್ರು ಕಳ್ಕೊತಿವ?....
ಮುಗಿಯದ exam, ಯುರೋಪಿಯನ್ ಕಪ್ ಮತ್ತು ಸ್ಲೊವೇನಿಯ/ ಇಟಲಿ ಯಲ್ಲಿ ಅಲೆಯುತ್ತಾ.......
ಎಲ್ಲಾ ಸರಿಯಾಗಿದ್ದರೆ ಇಷ್ಟೊತ್ತಿಗೆ ನನ್ನ PhD ಯಾ ಅಂತಿಮ ಪರೀಕ್ಷೆ ಮುಗಿದು ಸುಮಾರು ಒಂದುವರೆ ತಿಂಗಳಾಗುತ್ತಿತ್ತು, ಈ ಯುರೋಪಿಯನ್ಸ್ ಜೀವನದಲ್ಲಿ ಏನು ಬೇಕಾದರು ಕಳೆದುಕೊಳ್ತಾರೆ ಆದರೆ ತಮ್ಮ ಬೇಸಿಗೆ ರಜೆ ಮಾತ್ರ, ಯಾವುದೇ ಕಾರಣಕ್ಕೂ ಇಲ್ಲ. ಈ ಎರಡು ತಿಂಗಳಲ್ಲಿ ನಾನು ಪರೀಕ್ಷೆ ತೆಗೆದುಕೊಳ್ಳಲೇ ಬಾರದು ಎಂದು ಯುನಿವರ್ಸಿಟಿ ತಾಕಿತು ಮಾಡಿದ್ದರಿಂದ, ಎಲ್ಲಾ ಮರೆತು ತಣ್ಣಗೆ ಚಿಲ್ದ್ ಬೀಯರ್ ಹೀರುತ್ತಾ ಯುರೋಪಿಯನ್ ಫುಟ್ ಬಾಲ್ ಕಪ್ ನೋಡಿದ್ದಾಯಿತು. ಅದಾದ ಮೇಲೆ ಸ್ಲೊವೇನಿಯ, ಮತ್ತೆ ಇಟಲಿ ಗೆ ಒಂದು ಚಿಕ್ಕ ಪ್ರಯಾಣ.
ತುಂಬಾ ದಿನಗಳಿಂದ ನಾನು ನನ್ನ ಸ್ನೇಹಿತ ಎಲ್ಲಿಗಾದ್ರೂ ಹೋಗಬೇಕೆಂದು ಯೋಚಿಸುತ್ತಿದ್ದೆವು, ಮೊದಲಿಗೆ ಟರ್ಕಿ ಹೋಗಬೇಕೆಂದು ಕೊಡಿದ್ದೆವು, ಸುಮ್ಮನೆ ಯಾಕೆ ಎರಡು ಮುರೂ ವೀಸಾ ಗಳ ರಗಳೆ ಅಂದುಕೊಂಡು, ಜರ್ಮನಿ, ಡೆನ್ಮಾರ್ಕ್ ಹೋಗಬೇಕೆಂದು ಕೊಡೆವು, ಕೊನೆಗೆ ನಾವು ಹೋಗಿದ್ದು ಆಸ್ಟ್ರಿಯ ಮಾರ್ಗವಾಗಿ ಸ್ಲೊವೇನಿಯ ತಲುಪಿ, ಅಲ್ಲಿಂದ ಇಟಲಿ ಗೆ ಒಟ್ನಲ್ಲಿ ಒಂದು ವಾರದಲ್ಲಿ ಎರಡು ದೇಶ ಸುತ್ತಿದಾಯಿತು.
ಕೆಲವು ವಿಯನ್ನ ಪ್ರವಾಸದ ಫೋಟೋಗಳು
ಅಂತೂ ಕೊನೆಗೆ ನನ್ನ ವಿಯನ್ನ ಪ್ರವಾಸದ ಫೋಟೋಗಳು ರೆಡಿ ಆಗಿವೆ. ಇಷ್ಟು ಚಿಕ್ಕ ಕೆಲಸಕ್ಕೆ ಸುಮಾರು ಒಂದು ತಿಂಗಳ ಮೇಲೆ ತಂಗೊಂಡಿದಿನಿ. ತುಂಬಾ ಬ್ಯುಸಿ ಏನು ಇರಲಿಲ್ಲ ಆದರೆ ಅದೇ ನನ್ನ ಹಳೆ ಚಾಳಿ, ಯಾವುದಾದರು ಪ್ರವಾಸ ಮುಗಿದ ನಂತರ, ತಕ್ಷಣ ಒಂದು ಸತಿ ಎಲ್ಲ ಫೋಟೋ ಗಳ ಮೇಲೆ ಕಣ್ಣಾಡಿಸಿ, ಸುಮ್ಮನಾಗಿ ಬಿಡ್ತೀನಿ.
ಫೋಟೋಗಳನ್ನು ಈ ಕೊಂಡಿಯಲ್ಲಿ ಕಾಣಬಹುದು
ಮುಗಿದ ಚುನಾವಣೆ ಲೆಕ್ಕಾಚಾರ.......
ಈ ಜನ್ಮದಲ್ಲಿ ಯಡಿಯುರಪ್ಪನಿಗೆ ಮುಖ್ಯಮಂತ್ರಿ ಆಗಲು ಯೋಗ್ಯವಿಲ್ಲ ಅಂತ ಯಾರೋ ಜ್ಯೋತಿಷಿ ಹೇಳಿದ್ದನಂತೆ, ಅದೇ ಯಡೀಯುರಪ್ಪ ಮುಖ್ಯಮಂತ್ರಿ ಕುರ್ಚಿ ಮೇಲೆ ಕೂತು ಸುಮಾರು ೧೨ ದಿನಗಳು ಆಗ್ತಾ ಬಂತು. ಈಗ ಆ ಜ್ಯೋತಿಷಿ ಏನು ಮಾಡ್ತಾ ಇರಬಹುದು ಅಂತ ತುಂಬಾ ದಿನದಿಂದ ಯೋಚಿಸ್ತಾ ಇದೀನಿ. ಅದಕ್ಕೆ ಅಲ್ವಾ ಹೇಳೋದು, ಯಾರಾರು ಯಾವ ಕೆಲಸ ಮಾಡಬೇಕೋ ಆ ಕೆಲ್ಸ ಮಾಡಿದ್ರೆನೆ ಚೆಂದ ಅಂತ. ಅಲ್ಲಾ ರಾಜಕೀಯನೆಲ್ಲ ಜ್ಯೋತಿಷಿಗಳು ನಿರ್ಧರಿಸುವ ಹಾಗಿದ್ದರೆ, ಈ ಚುನಾವಣೆ ಯಾಕೆ ಬೇಕು, ಸುಮ್ನೆ "ಚುನಾವಣಾ ಪ್ರಾಧಿಕಾರ" (Election comission) ದವರು ಅಷ್ಟು ಖರ್ಚು ಮಾಡಿ ಚುನಾವಣೆ ನಡೆಸೋ ಬದಲು, ಯಾರಾದ್ರು ಒಬ್ಬ ಜ್ಯೋತಿಷಿನ ಹುಡುಕಿ, ಅವನು ಯಾವ ಪಕ್ಷ ಹೇಳ್ತೊನೋ ಆ ಪಕ್ಷಕ್ಕೆ ಅಧಿಕಾರ ಕೊಟ್ರೆ ಎಲ್ಲಾ ಎಸ್ಟು ಸಲಿಸು ಅಲ್ವಾ?...
ಬಿಜೆಪಿ, ಹೇಗೆ ಗೆದ್ರು ಅಂತ ಯಾರುನಾದ್ರು ಕೇಳಿದ್ರೆ ಉತ್ತರ ಕೊಡೋದು ಕಷ್ಟನೆ, ಬೇರೆ ಯಾರು ಯಾಕೆ? ನಮ್ಮ ಮುಖ್ಯಮಂತ್ರಿ ಅವರನ್ನೇ ಕೇಳಿದ್ರು ಅವರಿಗೂ ಉತ್ತರ ಹುಡುಕೋದು ಕಷ್ಟನೆ. ಇದೆ ಪ್ರಶ್ನೆ ನ ಬಿಜೆಪಿ ಗೆದ್ದ ಬಳಿಕ ಪತ್ರಕತ್ರರು ಬಿಜೆಪಿಯ "Brian man" ಅರುಣ್ ಜೇಟ್ಲಿ ಯವರನ್ನು ಕೇಳಿದಕ್ಕೆ, "ಬೇರೆ ಪಕ್ಷದವರು ಅವರ ಪಕ್ಷದಿಂದ ಯಾರು ಮುಖ್ಯಮಂತ್ರಿ ಎಂದು ಹೆಸರಿಸುವುದನ್ನ ಬಿಟ್ಟಿದ್ದರು ಆದರೆ ನಾವು ಮೊದಲಿನಿಂದಲೂ ಯಡಿಯುರಪ್ಪನವರೇ ನಮ್ಮ ಮುಖ್ಯಮಂತ್ರಿ ಎಂದು ಬಿಂಬಿಸಿದರಿಂದ ಗೆಲುವು ಸುಲಭವಾಯಿತು" ಎಷ್ಟು ಸಾಧಾರಣ ಪ್ರಶ್ನೆಗೆ ಎಷ್ಟು ಸಾಧಾರಣ ಉತ್ತರ ಅಲ್ವಾ?... ಇಂತ ಉತ್ತರ ಅರುಣ್ ಜೇಟ್ಲಿ ಅಂಥ ಪಳಗಿದ ರಾಜಕಾರಣಿಯಿಂದ ಮಾತ್ರ ಬರಲು ಸಾಧ್ಯ.
ಬರೀ ಮುಖ್ಯಮಂತ್ರಿಯ ಹೆಸರು ಸೂಚಿಸಿರುವುದರಿಂದ ಮಾತ್ರ ಒಂದು ಪಕ್ಷ ಗೆಲುತ್ತೆ ಅಂದ್ರೆ ನಾನು ನಂಬಲ್ಲ, ನನ್ನ ಪ್ರಕಾರ ಬಿಜೆಪಿ ಗೆದ್ದಿದೆ ಅನ್ನುವುದಕ್ಕಿಂತ ಬೇರೆ ಪಕ್ಷದವರು ಸೋತಿದ್ದಾರೆ ಅನ್ನುವುದು ಹೆಚ್ಚು ಸುಕ್ತಾ. ಅಸಲು ಪ್ರತೀ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಗಮನಿಸಿದರೆ ಎಲ್ಲದರಲ್ಲೂ ಇದ್ದಿದ್ದು ಒಂದೇ, ಬೆಲೆ ಏರಿಕೆ, ರೈತ-ಹಳ್ಳಿ ಉದ್ದಾರ, ಹಾಳು ಮುಳು ಅಷ್ಟೆ. ಈ ಚುನಾವಣೆಯಲ್ಲಿ ಜಾಸ್ತಿ ಹೊಡ್ತಾ ಬಿದ್ದಿದ್ದು ಅಂದ್ರೆ ಕಾಂಗ್ರೆಸ್ಸಿಗೆ, ಸೋನಿಯಾ ಗಾಂಧಿ ಏನಾದ್ರು ಕ್ರಿಶ್ಚಿಯನ್ ಧರ್ಮ ಪ್ರಚಾರ ಮಾಡುವದರಲ್ಲಿ ತೋರಿಸಿದಷ್ಟು ಆಸಕ್ತಿ ಸ್ವಲ್ಪನಾದ್ರೂ ಕರ್ನಾಟಕದ ಚುನಾವಣೆ ಮೇಲೆ ತೋರಿಸಿದ್ದರೆ ಕಾಂಗ್ರೆಸ್ಸಿಗೆ ಇನ್ನೊಂದಿಷ್ಟು ಸೀಟುಗಳು ಬರುತ್ತಿತ್ತೇನೋ??. ಇತ್ತ ದೇವೇಗೌಡ ಮತ್ತು ಅವರ ಮಕ್ಕಳದ್ದು ಅದೇ ಹಳೇ ಕತೆ, ಜನ ಎಷ್ಟು ದಿನ ಅಂತ ಕೇಳಿದ್ದೆ ಕೇಳ್ತಾರೆ. ನಿಜ ಹೇಳಬೇಕೆಂದರೆ ದೇವೇಗೌಡರಿಗೆ ಜಾಸ್ತಿ ಹೊಡ್ತಾ ಕೊಟ್ಟಿದ್ದು ಪತ್ರಕತ್ರರು, ಯಾಕೋ ಏನೋ, ಎಲ್ಲರೂ ಒಂದೇ ಸತಿ ಅವರಿಗೆ ತಿರುಗಿ ಬಿದ್ದುಬಿಟ್ರು, ಈ ಹೊಡೆತದಿಂದ ಮೇಲೆ ಏಳಕ್ಕೆ ದೇವೇಗೌಡರಿಗೆ ಇನ್ನೂ ಕೆಲವು ವರುಷಗಳಾದ್ರು ಬೇಕು. ಇನ್ನ ಕೆಲವು ಐ ಟಿ ಜನ ಕೂಡ ಚುನಾವಣೆಯಲ್ಲಿ ಸ್ಪರ್ದಿಸಿ, ಎಸ್ ಎಂ ಎಸ್, ಬ್ಲಾಗ್, ವೆಬ್ ..... ಹೀಗೆ ನಾನಾತರಗಳಿಂದ ಪ್ರಚಾರ ಕಾರ್ಯ ಕೈಗೊಂಡಿದ್ದು ಸುದ್ದಿಯಾಗಿತ್ತು, ಆದರೆ ಅಸಲು ಬ್ಲಾಗ್, ವೆಬ್, ಈ-ಮೈಲ್ ಓದೋವರು ಯಾರು ಮತ ಗಟ್ಟೆ ಕಡೆ ತಲೆ ಹಾಕೊಲ್ಲ ಅನ್ನೋದು ಈ ಐ ಟಿ ಜನಗಳಿಗೆ ಯಾಕೆ ಅರ್ಥ ಅಗಿಲ್ವೋ ನಾ ಕಾಣೆ. ಏನೇ ಅಂದ್ರು ಇಂತ ಜನಗಳು ಚುನಾವಣೆಗೆ ಧುಮುಕುತಿರುವುದು ಶುಭ ಸಂಕೇತ, ಆದರೆ ಇಂತವರು ಅಧಿಕಾರಕ್ಕೆ ಬರಲು ನಾವು ಇನ್ನೂ ಸ್ವಲ್ಪ ದಿನ ಕಾಯಬೇಕು, ಅಲ್ಲಿವರೆಗೂ ನಮಗೆ ದೇವೇಗೌಡ, ರೇವಣ್ಣ, ಕೂಮಾರ ಸ್ವಾಮಿ ಗಳು ತಪ್ಪಿದಲ್ಲ.
ಒಟ್ನಲ್ಲಿ ಏನು ಅಲ್ದಲೇ ಇದ್ರು, ಈ ಸತಿ ಸದ್ಯ ಆ ಮೈತ್ರಿ ಸರ್ಕಾರ...... ಆ ರೆಸಾರ್ಟ್ ನ ದೊಂಬರಾಟ... ದೇವೇಗೌಡರ ಶಾನೆ ರಾಜಕೀಯ.... ಇವೆಲ್ಲ ಇಲ್ದಲೇನೆ ಒಂದು ಸರ್ಕಾರ ರಚನೆ ಆಗಿದೆ, ಅಷ್ಟಕಾದ್ರು ಯಡಿಯುರಪ್ಪನವರಿಗೆ ನಾವು ಒಂದು ಥ್ಯಾಂಕ್ಸ್ ಹೇಳಬೇಕು. ಅಷ್ಟಕ್ಕೂ ಹೊಸ ಸರ್ಕಾರ ಈಡೀ ಕರ್ನಾಟಕವನ್ನೇ ಬದಲಾಯಿಸುತ್ತೆ ಅಂದುಕೊಂಡರೆ ಅದು ನಮ್ಮ ತಪ್ಪು. ಅಷ್ಟಕ್ಕೂ ಇವರು ಕೂಡ ರಾಜಕಾರಣಿಗಳೇ, ಅತೀಯಾದ ನೀರೆಕ್ಷೆ ಇಲ್ಲದೇನೆ ಕಾದು ನೋಡೋಣ, ಇವರೂ ಮುಂಚಿನವರ ಹಾಗೆ ನಾಲಾಯಕ್ಕು ಅಂತಾದರೆ ಮತ್ತೆ ಹೇಗಿದ್ರೂ ಚುನಾವಣೆ ಬಂದೆ ಬರುತ್ತೆ, ಆಗ ಮತ್ತೆ ಕಾಂಗ್ರೆಸ್ಸಿಗೋ, ಜನತಾ ದಳ ಕ್ಕೋ ಗುದ್ದೀದರಾಯ್ತು.... ಏನಂತೀರ???
ನಮ್ಮನ್ನೆಲ್ಲಾ ಒಟ್ಟಿಗೆ ಬೆಸೆದಿರುವ ಆರ್ಕುಟ್ (orkut) ಎಂಬ ಮಾಯಾವಿ ಬಗ್ಗೆ......
ನನಗೂ ಈ ಆರ್ಕುಟ್ ಗು ಬಹುಶಃ ಒಂದು ವರ್ಷದ ಸಂಬಧ. ಆ ಮುಂಚೆ ಇದರ ಬಗ್ಗೆ ಕೇಳಿದ್ದೆ, ಆದರೆ ಜಾಸ್ತಿ ತಲೆ ಕೆಡಿಸಿಕೊಂಡಿರಲಿಲ್ಲ. ಆ ನಂತರ ನಾನು ಅಲ್ಲಿ ಒಂದು ಖಾತೆ ತೆರಿದಿದ್ದು ಆಯಿತು, ಎಲ್ಲೋ ಕಳೆದ್ದು ಹೋಗಿದ್ದ ಬಾಲ್ಯದ ಸ್ನೇಹಿತರನ್ನು ಸಂಧಿಸಿದ್ದು ಅಯಿತು. ಇದೆಲ್ಲ ಪೀಠಿಕೆ ಯಾಕೆ ಅಂದ್ರೆ ಮೊನ್ನೆ ಹಳೆಯ ಸ್ನೇಹಿತ, ಆರ್ಕುಟ್ ನಿಂದ ನಾವೆಲ್ಲ ಮತ್ತೆ ಒಬ್ಬರಿಗೊಬ್ಬರ ಹೇಗೆ ಪರಿಚಯವಾಯಿತು ಎಂದೆಲ್ಲಾ ವಿವರಿಸುತ್ತಿದ್ದ. ನಿಜ ನಾನು ಒಪ್ತೀನಿ ಆರ್ಕುಟ್ ಇಲ್ಲದಲ್ಲೇ ಇದ್ದಿದ್ರೆ ನಾನು ಸುಮಾರು ಸ್ನೇಹಿತರನ್ನು ಮತ್ತೆ ನೋಡುತ್ತಿದ್ದೇನೋ ಇಲ್ವೋ ಯಾರಿಗೆ ಗೊತ್ತು. ಆ ವಿಷಯದಲ್ಲಿ ನಾನು ಆರ್ಕುಟ್ ಗೆ ಋಣಿ. ಅದ್ರೆ ಇದೇ ಆರ್ಕುಟ್ ನಿಂದ ನಾವು ಕಳೆದುಕೊಂಡಿದ್ದೆಷ್ಟು?....
ನಿಜ ಹೇಳಬೇಕೆಂದರೆ ನನ್ನ ಶಿಕಾಯತ್ ಇರೋದು ಆರ್ಕುಟ್ ಮೇಲೆ ಅಲ್ಲ, ಇಂದು ಚಾಲ್ತಿ ಇರುವ ಎಲ್ಲಾ ಸಂಪರ್ಕ ಸಾಧನಗಳ ಮೇಲೆ, ಅದು ಇಂಟರ್ನೆಟ್ ನ ಆರ್ಕುಟ್, ಪೇಸ್ ಬುಕ್ ಇರಬಹುದು ಅಥವಾ ಮೊಬೈಲ್ ಪ್ರಪಂಚದ ಎಸ್ ಎಂ ಎಸ್ ಇರಬಹುದು. ಈಗಾ ಆರ್ಕುಟ್ ನೆ ತಗೊಂಡ್ರೆ, ಹೈ, ಹಲೋ ದಿಂದ ಹಿಡಿದು, ಊಟ, ತಿಂಡಿ ಯಿಂದ ಕೊನೆಗೆ ತನ್ನ ಮದುವೆಗೆ ಆಮಂತ್ರಣ ಕೂಡ ಒಂದೇ ಲೈನ್.... ಫಿನಿಶ್. ಅಲ್ಲಿ ಅದಕ್ಕಿಂತ ಜಾಸ್ತಿ ಏನು ಬರೆಯಲು ಸಾದ್ಯಾ? ಪುಟಗಟ್ಟಲೆ ಕ್ಷೇಮ ಸಮಾಚಾರ ವಿಚಾರಿಸುತ್ತಾ ಬರೆಯುತ್ತಿದ್ದ ಪತ್ರಗಳೆಲ್ಲಿ?
ನಾನು ನಾಲ್ಕು ವರುಷಗಳ ಹಿಂದೆ ಹಂಗೇರಿ ಗೆ ಬಂದಾಗ, ನಾನು ಮತ್ತು ಅಪ್ಪ-ಅಮ್ಮ ಮಾತನಾಡುತ್ತಿದ್ದುದ್ದು ಪತ್ರಗಳ ಮುಖೇನ, ಪ್ರತಿ ೧೫ ದಿನಕ್ಕೆ ಒಂದರಂತೆ ಅವರಿಂದ ಒಂದು ಅಂತರದೇಶಿಯ ಪತ್ರ ಬರುತಿತ್ತು, ಆ ಪತ್ರಗಳಲ್ಲಿ ಹೆಚ್ಚಿನ ಭಾಗ ಅಮ್ಮನ ಪಾಲು, ಕೊನೆಯ ಕೆಲವು ಲೈನ್ ಮಾತ್ರ ಅಪ್ಪನಿಗೆ. ಇಲ್ಲಿಗೆ ಬಂದಾಗ ಅವರ ಮೊದಲ ಸಿಕ್ಕ ಪತ್ರ್ಣ ಇನ್ನು ಚೆನ್ನಾಗಿ ನೆನಪಿದೆ, ರೂಮಿನಲ್ಲಿ ಒಬ್ಬನೇ ಭಾಗಿಲು ಹಾಕಿ ಕೊಂಡು ಅ ಪತ್ರವನ್ನು ಎಸ್ಟು ಸಾರಿ ಓದಿದಿನೋ ಯಾರಿಗೆ ಗೊತ್ತು? ಆ ನಂತರ ದಿನಗಳಲ್ಲಿ ತರಿಕೆರೆ ಎಂಬ ಚಿಕ್ಕ ಊರಿಗೂ ಇಂಟರ್ನೆಟ್ ಬಂತು, ಕ್ರಮೇಣ ಪತ್ರಗಳು ಕೂಡ ಮಾಯವದವು. ಆ ಹದಿನೈದು ದಿನದ ಚಡಪಡಿಕೆ, ಪತ್ರ ಕೈಗೆ ಬಂದಾಗ ಆಗೋ ಕಾತುರ ಎಲ್ಲವೂ ಕೂಡ ಮಾಯ.
ಎಲ್ಲರೂ ಹೀಗೆ ಒನ್ ಲೈನ್ ಮೆಸೇಜ್ ಗೆ ಜೋತು ಬಿದ್ದಿದಾರೆ ಅಂತ ನಾ ಹೇಳಲ್ಲ, ನನಗೆ "ಬರ್ನಾಡ್" ಎಂಬ ಜರ್ಮನಿಯಾ ಒಬ್ಬ ಸ್ನೇಹಿತನಿದ್ದಾನೆ, ಅವನು ಈ-ಮೈಲ್ ಮಾಡೋದು, ವರ್ಷಕ್ಕೆ ಒಂದು ಸರಿ ಮಾತ್ರ, ಆದರೆ ಅವನ ಪ್ರತಿ ಮೈಲ್ ಕೂಡ ಕಮ್ಮಿ ಅಂದ್ರೆ ಎರಡು ಪುಟಗಳಿಷ್ಟುರುತ್ತೆ. ಒಂದು ವರ್ಷ ಕಾದ ನಂತರ ಹೀಗೆ ಸಿಗೋ ಮೈಲ್ ನಲ್ಲಿ ಎಷ್ಟು ಮಜಾ ಇರುತ್ತೆ ಅಲ್ವಾ?
ಹೀಗೆ ಯಾಕೋ ನನ್ನ ಹಳೆಯ ಈ-ಮೈಲ್ ಗಳನ್ನು ಓದುತ್ತಿದ್ದಾಗ, ನನ್ನ ಸ್ನೇಹಿತೆ ಬರೆದ ಕೆಲವು ಮೈಲ್ ಗಳ ಕಂಡವು, ಅವಳ ಪ್ರತಿ ಮೈಲ್ ಕೂಡಾ "ಜೋಪಾನ ಕಣೋ" ಅನ್ನುವುದರೊಂದಿಗೆ ಮುಗಿಯುತ್ತಿತ್ತು. ಇತ್ತೀಚೆಗೆ ಅವಳು ಕೂಡಾ ಆರ್ಕುಟ್ ಗೆ ಜೋತು ಬಿದ್ದ ಮೇಲೆ, ಅವಳ ಮೈಲ್ ಕೂಡಾ ನಾಪತ್ತೆ ಅದರ ಜೊತೆಗೆ "ಜೋಪಾನ" ಅನ್ನೋ ಕಾಳಜಿ ಕೂಡಾ. ಹೀಗೆ ನನ್ನ ಹಳೆಯ ಮೈಲ್ ಗಳತ್ತ ಇಣುಕುತ್ತಿದ್ದಾಗ, ನಾನು ಅರಿತ ಒಂದು ವಿಶಯ ಏನಪ್ಪಾ ಅಂದ್ರೆ, ಈ ಆರ್ಕುಟ್ ಬಂದ ಎರಡು ವರ್ಷದಲ್ಲಿ ನಮ್ಮ ಜೀವನವನ್ನು ಎಷ್ಟು ಬದಲಾಯಿಸಿದೆ ಅಲ್ವಾ?
ಪ್ರೀತಿಯ (love)... ಪ್ರಪೋಸಲ್
ಯಾವ ರೀತಿ ತಮ್ಮ ಪ್ರೀತಿಯನ್ನ ವ್ಯಕ್ತ ಪಡಿಸಿದರು ಎಂಬುದರ ಬಗ್ಗೆ ಮೂವರಲ್ಲಿ ಚರ್ಚೆ ನಡೆಯುತ್ತಿತ್ತು.
ಮೊದಲನೆಯವನಂದ, "ನಾನು ಆಫೀಸಿನಲ್ಲಿ ಎಲ್ಲರೆದುರು, ಕೈಯಲ್ಲಿ ಗುಲಾಬಿ ಹೂವು ಹಿಡಿದು, ಮಂಡಿಯೂರಿ, ನೀನು ನನ್ನ ಮದುವೆಯಾಗುವೆಯಾ" ಎಂದು ಎಲ್ಲರೆದುರು ಕೇಳಿದೆ, ಅವಳು ತನ್ನ ಕಣ್ಣಂಚಿನ ನೀರು ಒರೆಸುತ್ತಾ "ಹೂ" ಎನ್ನುತ್ತಿದ್ದರೆ, ಈಡೀ ಆಫೀಸಿನ ತುಂಬಾ ಚಪ್ಪಾಳೆಯ ಸದ್ದು... it was a touching moment ಅಂದ.
ಎರಡನೆಯವನು, ನಾನು ನನ್ನವಳೊಂದಿಗೆ, ಫೈವ್ ಸ್ಟಾರ್ ಹೋಟೆಲ್ ಗೆ ಡಿನ್ನರ್ ಗೆಂದು ಹೋಗಿ, ಅಲ್ಲಿ ಅವಳ ಕೈಯಲ್ಲಿ ವಜ್ರದ ಉಂಗುರ ಇಡುತ್ತಾ "will you marry me" ಎಂದೆ. ಅವಳ ಕಣ್ಣಲ್ಲಿ ಅವತ್ತು ಕಂಡ ಹೊಳಪು ನನ್ಯಾವತ್ತು ಮರೆಯಲು ಸಾದ್ಯವಿಲ್ಲ.... it was a romantic evening ಅಂದ.
ಮೊದಲ್ಲಿಬ್ಬರು ಮುರನೆಯವನು ಏನು ಹೇಳಬಹುದು ಎಂದು ಕುತುಹುಲದಿಂದ ಇವನತ್ತ ನೋಡಿದರು. "ನಾನು ಅವಳ ಕೈಗೆ ಗುಲಾಬಿ ಹೂಗಳ ಸುಂದರವಾದ ಹುಗುಚ್ಚ ಇಡುವಾಗ, ಯಾಕೋ ಬಾಯಿಯಿಂದ ಶಬ್ದಗಳೇ ಹೊರಡಲಿಲ್ಲ, ನನಗೆ ತಿಳಿಯದೆನೆ ಕಣ್ಣಿಂದ ಧಾರಾಕಾರ ನೀರು ಹನಿಯುತಿತ್ತು, ಅವಳು ಏನು ತಿಳಿಯದೆ ಪ್ರಶ್ನಾರ್ತಕವಾಗಿ ನನ್ನತ್ತ ನೋಡಲು, ಏನು ಹೇಳಲು ತೋಚದೆ ನಾನು ಹೊರ ನಡೆದೆ. ಕಣ್ಣೀರು ತಡೆಯುವ ಅವಸರದಲ್ಲಿ ಅವಳಿಗೆ "wish you a very happy married life" ಅಂತ ಹೇಳುವುದನ್ನು ಮರೆತ್ತಿದ್ದೆ. ಯಾಕೋ ಕಣ್ಣೀರು ವರೆಸುತ್ತಾ ಹೊರ ಬರುತ್ತಿರುವಾಗ, ಎಲ್ಲರೂ ನನ್ನನ್ನೇ ನೋಡುತ್ತಿರಲು, ಬೆತ್ತಲಾಗಿ ಅವರೆದುರು ನಡೆಯುತ್ತಿದ್ದೇನೋ ಅನ್ನಿಸಿತು ..... That is one moment i want to forget" ಅಂದ.
ಮೊದಲಿಬ್ಬರು ಮುರನೆಯವನ ಮಾತನ್ನು ಮುಕಸ್ಮಿಕರಾಗಿ ಕೇಳುತ್ತಿದ್ದರು, ಅವರ ಪ್ರೀತಿ ಮುರನೆಯವನ ಮುಂದೆ ಬೆತ್ತಲಾಗಿ ನಿಂತ್ತಿತ್ತು.
ಕೊನೆಯಲ್ಲಿ ಎಲ್ಲರೂ ಖುಷಿ ...... life is beautiful
ಅದೇ ಕಾಫಿ ಶಾಪ್, ಮುಲೆಯಲ್ಲಿರುವ ಅದೇ ಟೇಬಲ್-ಕುರ್ಚಿ ಇವರಿಬ್ಬರ ಪ್ರೀತಿಯ ಸಂಕೇತ . ಸುಮಾರು ಎರಡು ವರ್ಷಗಳ ಕೆಳಗೆ ಅದೇ ಕಾಫೀ ಶಾಪ್ ನ ಅದೇ ಟೇಬಲ್ ಮೇಲೆ ಇವರ ಪ್ರೀತಿ ಮೊಳಕೆ ಹೊಡೆದಿತ್ತು, ಹೀಗೆ ಕಳೆದೆರಡು ವರ್ಷಗಳಿಂದ ಇವರ ಭೇಟಿ ಪ್ರತಿ ಸಾಯಂಕಾಲ ಬಿಸಿ ಬಿಸಿ ಕಾಫಿ ಜೊತೆ ಅದೇ ಶಾಪ್ ನಲ್ಲಿ ನಡೆಯುತ್ತಿತ್ತು. ದಿನಗಳು ಕಳೆದಂತೆ, ಇವನಿಗೆ ಅವಳು ಸಪ್ಪೆ ಅನ್ನಿಸತೊಡಗಿದಳು, ಅವಳು ನಗು ಯಾಕೋ "ಆ" charm ಕಳೆದುಕೊಂಡಿದೆ ಅನ್ನಿಸತೊಡಗಿತ್ತು. ಅವಳಿಗು ಕೂಡಾ ಒಂದು ಕಾಲದಲ್ಲಿ "most romantic" ಆಗಿದ್ದವನು "totally useless" ಆಗಿದ್ದ. ಇವನಿಗೂ ಹೊಸದಾಗಿ ಇವನ ಕಂಪನಿ ಸೇರಿದ್ದ ಗುಂಗುರು ಕೂದಲಿನ ಹುಡುಗಿ ಇಷ್ಟವಗತೊದಗಿದ್ದಳು, ಅತ್ತ ಅವಳಿಗೆ ಯಾವುದೋ NRI ಸಂಭಂದ ಕುದುರಿತ್ತು.
ಕೊನೆಯಸಾರಿ ಅದೇ ಕಾಫಿ ಶಾಪ್ ನಲ್ಲಿ ಭೇಟಿಯಗುವುದೆಂದು ನಿರ್ಧರಿಸಿದರು. ಅದೇ ಕುರ್ಚಿ ಮೇಲೆ ಘಂಟೆಗಟ್ಟಲೆ ಬೇಡದ ವಿಷಯಗಳ ಮೇಲೆಲ್ಲ ಹರಟುತ್ತಿದ್ದವರಿಗೆ, ಅಂದು ಯಾಕೋ ಯಾವ ರೀತಿ ಮಾತು ಶುರುಮಾಡಬೇಕೆಂದು ತಿಳಿಯದೆ ಚಡಪಡಿಸುತ್ತಿದ್ದರು. ಕೊನೆಗೆ ಅವಳೇ ತನ್ನ engagement ಫಿಕ್ಸ್ ಆಗಿರುವುದೆಂದು, ಅದಕ್ಕೆ ತನ್ನ ಒಪ್ಪಿಗೆ ಕೂಡ ಇರುವುದೆಂದು ತಿಳಿಸಿದಳು. ಇವನಿಗೆ ಪ್ರಪಂಚದ ಭಾರವೆಲ್ಲ ತಲೆಯಿಂದ ಇಳಿದಂತಾಗಿ Congratulations ಎಂದು ಅವಳ ಕೈ ಕುಲುಕಿದ್ದ. ಕಾಟಾಚಾರಕ್ಕೆ ಒಂದೆರಡು ಮಾತಾಡಿ, ಕಾಫಿ ಹೀರಿ, ಇಬ್ಬರೂ ಪ್ರತಿ ಸಾರಿ ಕೊಡುವುದಕ್ಕಿಂತಲೂ ಹೆಚ್ಚು ಟಿಪ್ಸ್ ಇತ್ತು ಹೊರ ನಡೆದರು.
ಅವಳಿಗೆ ಸದ್ಯ ತನ್ನ engagement ದಾರಿ ಸುಗುಮವಾಯಿತಲ್ಲ ಅನ್ನೋ ಖುಷಿ, ಇವನಿಗೆ ಇಗಲಾದರೂ ಆ ಗುಂಗುರು ಕೂದಲು ಹುಡುಗಿಗೆ ಪ್ರಪೋಸ್ ಮಾಡಬಹುದು ಎಂಬ ಖುಷಿ, ಇತ್ತ ಎಂದೂ ಸಿಗದ ಅಷ್ಟೊಂದು ಟಿಪ್ಸ್ ಅನ್ನು ತನ್ನ ಜೇಬಿನೊಳಗೆ ಇಳಿಸುತ್ತ ವೈಟರ್ ಖುಶಿಪಡುತ್ತಿದ್ದ.
ಒಟ್ನಲ್ಲಿ ಕೊನೆಯಲ್ಲಿ ಎಲ್ಲರು ಖುಷಿ..... ಇದಕ್ಕೆ ಅಲ್ವಾ ಹೇಳೋದು ....life is beautiful
ವಿಯನ್ನ ಪ್ರವಾಸ ಮತ್ತು ಹರಟೆ ಹೊಡೆದ ಕ್ಷಣಗಳು
ವಿಯನ್ನ ಹೋಗಿ ಬಂದು ಸುಮಾರು 3 ವಾರಗಳಾದ್ರು, ಇಲ್ಲಿ ಬರೆಯಲಾಗಲಿಲ್ಲ. ನನ್ನ ಪ್ರವಾಸದ ಬಗ್ಗೆ ಹೇಳಬೇಕೆಂದರೆ "it was a great experience". ನಾನು ಅಲ್ಲಿ ಹೋಗಿದ್ದು ವಿಯನ್ನ ನೋಡುವುದಕ್ಕಿಂತ ಮುಖ್ಯವಾಗಿ ಸ್ನೇಹಿತನಾದ "ವಿನಯ್" ನೋಡಲು. ಅದೃಷ್ಟಕ್ಕೆ "ಯಾಸಿರ್" ಕೂಡ ಜರ್ಮನಿಯಿಂದ ಬಂದಿದ್ದ, ನಾನು "MSc" ಮಾಡಬೇಕಾದರೆ ಇವರಿಬ್ಬರೂ ನನಗೆ ಒಂದು ವರ್ಷ ಜುನಿಯರ್ ಆಗಿದ್ದವರು. ಅನಂತರ ವಿನಯ್ ನಾನು ಜೊತೆಯಾಗಿ ಕೆಲವು ತಿಂಗಳು ಒಟ್ಟಿಗೆ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ್ದೆವು, ಆದರೆ ಯಾಸಿರನ್ನು ನಾನು ನೋಡಿದ್ದು ಸುಮಾರು 6 ವರುಷಗಳ ನಂತರ. ಒಟ್ನಲ್ಲಿ ಅವರಿಬ್ಬರ ಜೊತೆ ನಾಲ್ಕು ದಿನ ಕಳೆಯುವ ಅದೃಷ್ಟ ನನ್ನದಾಗಿತ್ತು. ಹಂಗೇರಿ ಗೆ ಬಂದಾಗಿಂದ ನಾನು ತುಂಬಾ ಮಿಸ್ ಮಾಡಿಕೊಂಡಿದ್ದು ಅಂದರೆ, ಸುಮನ್ನೇ ಸ್ನೇಹಿತರ ಜೊತೆ ಕೂತು ಹೀಗೆ ಬೇಡದ ವಿಷಯಗಳ ಬಗ್ಗೆ ಹಾಳು ಹರಟೆ ಹೋಡಿಯೋದು. ಇಲ್ಲಿ ಮಾತಾಡಲು ಜನಗಳು ಇಲ್ಲ ಎಂದಲ್ಲ, ಏನು ಮಾತಾಡಬೇಕಾದರು ಹತ್ತು ಸಾರಿ ಯೋಚಿಸಿ, ತೂಗಿ ನೋಡಿ ಮಾತಾಡಬೇಕು, ಎಲ್ಲ ಆದಮೇಲೆ ಎಲ್ಲಿ ಯಾರಿಗೆ ನನ್ನ ಮಾತಿಂದ ಬೇಜಾರಾಯ್ತು ಅನ್ನೋ ಯೋಚನೆ ಬೇರೆ? ಇದೆಲ್ಲ ಯಾಕೆ ಅಂತ ಸುಮನ್ನೇ ನನ್ನ ಪಾಡಿಗೆ ನಾನು ಇದ್ದು ಬಿಡ್ತೀನಿ. ನೀವು ಏನೇ ಹೇಳಿ "ಲೋ ಮಗನೆ, ಅಮ್ಕಂಡಿರಲ್ಲೋ!!!" ಅನ್ನೊದ್ರಲ್ಲಿ ಇರೋ ಮಜಾ "whats up dude" ಅನ್ನೊದ್ರಲ್ಲಿ ಬರಲ್ಲ ಅಲ್ವಾ???. ವಿಯನ್ನ ದಲ್ಲಿ ನಾವು ಮಾಡಿದ್ದೂ ಅದನ್ನೇ ಸುಮನ್ನೇ ರಾತ್ರಿ ಇಡೀ ಕೂತು ಹರಟೆ ಹೊದಿದಿದ್ದು. ವಿಷಯ ಇಂತದೇ ಅಂತ ಇಲ್ಲ, "ಪ್ಯಾಂಟಿನ ಜಿಪ್ ಹಾಕಿಕೊಳದಲ್ಲೇ ಪಾಠ ಮಾಡಲು ಬರುತಿದ್ದ ಪ್ರೊಫೆಸರ್ ನಿಂದ ಹಿಡಿದು, ಕುಸಿಯುತಿರುವ ಡಾಲರ್" ವರೆಗೂ, ಒಟ್ನಲ್ಲಿ ಹೀಗೆ ಮನಸಾರೆ ಮಾತಾಡಿ, ಎಷ್ಟು ದಿನಗಾಳಗಿತ್ತು....... ಇದೆಲ್ಲರ ಜೊತೆಗೆ ಕನ್ನಡದ ಹಳೆಯ ಕ್ಲಾಸಿಕ್ "ನಾಗರ ಹಾವು" ಸಿನಿಮಾ ಬೇರೆ.... ಅ ಚಾಮಯ್ಯ ಮೇಸ್ಟ್ರು, ರಾಮಾಚಾರಿ... ಅಲಮೇಲು....ಇವೆಲ್ಲಾ ಕೇಳಿ ಎಸ್ಟು ದಿನಗಳಾಗಿತ್ತು?
ಇನ್ನು ವಿಯನ್ನ ಬಗ್ಗೆ ಹೇಳಬೇಕು ಅಂದ್ರೆ, "its amazing", ಆ ಸಿಟಿಯಲ್ಲಿ ಎಷ್ಟೊಂದು ಎನರ್ಜಿ ಇದೆ ಎಂದರೆ ದಿನಪೂರ್ತಿ ನಡೆದಾಡಿದ್ರು ಆಯಾಸ ಅನ್ನಿಸೋದೇ ಇಲ್ಲ. Thats what i like in Viyanna.... ಅದಲ್ಲದೆ ಯುರೋಪ್ ಗೆ ಬಂದಾಗಿಂದ ಅಷ್ಟೊಂದು ಭಾರತೀಯರನ್ನು ನಾನು ನೋಡಿದ್ದು ವಿಯನ್ನದಲ್ಲೇ!! ನೀವು ಎಲ್ಲಿ ನೋಡಿದರು, ಒಬ್ಬರಾದ್ರು ಭಾರತೀಯರು ಅಥವಾ ಪಾಕಿಸ್ತಾನಿಯರು ಸಿಕ್ಕೇ ಸಿಗುತ್ತಾರೆ. ಹೇಳಬೇಕೆಂದರೆ ನಾನು ಮೊದಲ ದಿವಸ ವಿಯನ್ನದ ಬಸ್ ಟರ್ಮಿನಲ್ ನಲ್ಲಿ ಇಳಿದಾಗ, ವಿನಯ್ ಗೆ ಫೋನ್ ಮಾಡಲು ಫೋನ್ ಬೂತ್ ಹುಡುಕುತ್ತಿದ್ದೆ. ಅಲ್ಲೇ ಪಕ್ಕದಲ್ಲಿ ಇದ್ದ ಪೇಪರ್ ಶಾಪ್ ನವನ್ನು ಕೇಳೋಣವೆಂದು ಹೋದರೆ, ಅಲ್ಲಿ ನನಗೆ ಕಂಡಿದ್ದು ಒಬ್ಬ ಪಾಕಿಸ್ತಾನಿ ಮತ್ತು ಒಬ್ಬ ಸರ್ದಾರ್ಜಿ ಹರಟೆ ಹೊಡೆಯುತ್ತಾ ನಿಂತಿದ್ದರು, ನನ್ನ ಕಸ್ಟ ನೋಡಿ ಫೋನ್ ಮಾಡಲು ತಮ್ಮ ಮೊಬೈಲ್ ಕೊಟ್ಟಿದಲ್ಲದೆ, ಅದರ ಹಣವನ್ನು ಕೂಡ ತಗಳಲು ನಿರಾಕರಿಸಿದರು, ಅದರ ಜೊತೆಗೆ ಕಾಫಿ ಮತ್ತು ತಿಂಡಿಯ ಒತ್ತಾಯ ಬೇರೆ..... ನಮ್ಮ ಮಣ್ಣಿನ ಗುಣ ಅನ್ನೋದು ಇದಕ್ಕೆ ಇರಬೇಕು ಅಲ್ವಾ?...
ಎಲ್ಲಿಗಾದ್ರು ಪ್ರವಾಸ ಹೋಗಿ ಬಂದ ಮೇಲೆ ಯುರೋಪ್ ನಲ್ಲಿ ಎಲ್ಲರೂ ಕೇಳೋ ಪ್ರಶ್ನೆ ಏನಪ್ಪಾ ಅಂದ್ರೆ.. ನೀನು ಅಲ್ಲಿ ಆ ಅರಮನೆಗೆ ಹೋಗಿದ್ದಾ??.. ಆ ಮ್ಯುಸಿಯಮ್ ನೋಡಿದ್ಯಾ?.... ಒಂದು ಟೈಮ್ ಟೇಬಲ್ ಹಾಕಿ ಕೊಂಡು, ನೋಡ ಬೇಕಾದ ಜಾಗಗಳನ್ನೆಲ್ಲ ಪಟ್ಟಿ ಮಾಡಿ, ಕೈ ಯಲ್ಲಿ ಮ್ಯಾಪ್ ಹಿಡಿದು ಇಡೀ ಸಿಟಿಯನ್ನು ಇಷ್ಟು ಟೈಮ್ ನಲ್ಲಿ ನೋಡಿಬಿಡ್ತೀನಿ ಅನ್ನೋ ಜಾತಿ ನಂದಲ್ಲ "No i can't" ನಾನು ಯಾವುದಾದರು ಹೊಸ ಜಾಗಕ್ಕೆ ಹೋದರೆ ಅಲ್ಲಿ ಇರೋ ಎನರ್ಜಿನ ಗಮನಿಸ್ತಿನಿ, ಸುತ್ತೋ ನಡೆದಡೋ ಜನಗಳ ನೋಡ್ತಾ ಕೂರ್ತಿನಿ, ಸುಮ್ನೆ ಹಾಗೆ ರಸ್ತೆಗಳಲ್ಲಿ ಒಂದು ಕ್ಯಾಮೆರ ತೂಗು ಹಾಕ್ಕೊಂಡು ಅಲೆದಾಡ್ತೀನಿ, ದಿನದ ಕೊನೆಯಲ್ಲಿ ಎಲ್ಲಿ ಹೋಗಿ ತಲುಪಬೇಕೆಂದು ಮಾತ್ರ ಗೊತ್ತಿರುತ್ತೆ, ಮಿಕ್ಕಿದಕ್ಕೆಲ್ಲ "dont care..." ಸುಮ್ನೆ ನಡೀತಾ ಇರೋದು ಅಷ್ಟೆ.... ಅದೇನೋ ನನಗೆ ಮ್ಯುಸಿಯಮ್ನಲ್ಲಿ, ಟೂರ್ ಬ್ರೌಚರ್ನಲ್ಲಿ, ಸಿಗ್ದಲ್ಲೇ ಇರೋದೆಲ್ಲ ... ಜನ ನದೆದಾಡೋ ರಸ್ತೆಗಲ್ಲಿ, ಹರಟೆ ಹೊಡಿಯುವ ಕಾಫಿ ಶಾಪ್ ಗಳಲ್ಲಿ, ಸಿಗರೇಟ್ ಹೊಗೆ ತುಂಬಿರೋ ಬಿಯರ್ ಬಾರ್ ಗಳಲ್ಲಿ ಸಿಗುತ್ತೆ.... ವಿಯನ್ನ ದಲ್ಲೂ ಅದನ್ನೇ ಮಾಡಿ ಬಂದಿದ್ದೇನೆ ಜೊತೆಗೆ ವಿನಯ್ ಮತ್ತು ಯಾಸಿರ್ ಜೊತೆ ಕಳೆದ ಸುಂದರ ನೆಪುಗಳು......ಮತ್ತು ರಾಶಿ ರಾಶಿ ಫೋಟೋಗಳು.
ಕೆಲಸ, ಪ್ರಯಾಣ ಮತ್ತೇ ಬ್ಲಾಗ್
ಬ್ಲಾಗ್ ಶುರು ಮಾಡ್ಬೇಕಾದ್ರೆನೆ ಗೊತ್ತಿತ್ತು, ತುಂಬ ರೆಗ್ಯುಲರ್ ಆಗಿ ಇಲ್ಲಿ ಬರಿಯೋದು ಸ್ವಲ್ಪ ಕಸ್ಟದ ಕೆಲ್ಸ ಅಂತ. ಬರೀಯೋಕೆ ಬೇಕಾದಷ್ಟು ವಿಷ್ಯ ಇದೆ, ಯಾಕೋ ಟೈಮ್ ಅಡ್ಜಸ್ಟ್ ಆಗ್ತಾ ಇಲ್ಲ. ಕಳೆದ ಹತ್ತು ದಿನಗಳಿಂದ ನನ್ನ Institute ನಲ್ಲಿ ಕೊಡಬೇಕಾದ ಸೆಮಿನಾರ್ ಬಗ್ಗೆ ಸ್ವಲ್ಪ ಬ್ಯುಸಿ ಇದ್ದೆ. ಪ್ರತಿ ಎರಡು ವರ್ಷಗಳಿಗೆ ಒಂದು ಸಾರಿ ಬರೋ ಸೆಮಿನಾರ್ ಇದು, ಹಾಗಾಗಿ ಸ್ವಲ್ಪ tension ಬೇರೆ ಇತ್ತು. ಮಾಮುಲಾಗಿ ಸೆಮಿನಾರ್ ಅಂದ್ರೆ ಸ್ವಲ್ಪ ಅರಾಮಾಗಿರ್ತೀನಿ, ಯಾಕೋ ಈ ಸಾರಿ ....... dissapointed. ಸೆಮಿನಾರ್ ಆದ ತಕ್ಷಣ ನಂಗೆ ಅನ್ನಿಸಿದ್ದು ಇಸ್ಟು "it was not me " ಅಂತ. ಪ್ರತಿ ಸೆಮಿನಾರ್ ಮುಗಿದ ತಕ್ಷಣ ಎಲ್ಲರ ಮುಖನ ಒಂದು ಸಾರಿ ಗಮನಿಸ್ತಿನಿ, ಅದ್ರೆ ಈ ಸಾರಿ ಮಾತ್ರ ನನಗೆ ಯಾಕೋ ಕಂಡಿದೆಲ್ಲಾ "blank faces". ಕಾರಣ ಬೇಕಾದಷ್ಟು ಇರಬಹುದು..... ಒಟ್ನಲ್ಲಿ "It was not my day".
ಆ ನೋವುನ್ನ ಮರೆಯೋಕೋ ಏನೋ, ಅದರ ಮುಂದಿನ ದಿನವೇ ರೋಮನಿಯ ಹೋಗಬೇಕಾಯ್ತು, ಇವತ್ತು ಬೆಳಿಗ್ಗೆ ಅಸ್ಟೆ ವಾಪಸ್ಸು ಬಂದಿದೀನಿ.... It was a great experience. ಅಲ್ಲೂ ಕೂಡ ನಾನು ಹೋಗಿದ್ದು ಒಂದು conference ಗೆ ಅಂತ, But had a great time. ನನ್ನ ಕ್ಯಾಮೆರ ತುಂಬಾ ಫೋಟೋ ಗಳು, ಮನಸ್ಸಿನ ತುಂಬ ಹಸಿ ಹಸಿ ನೆನಪುಗಳು, ಮುಂದೆ ಯಾವಾಗಲಾದ್ರು ಈ ಎರಡನ್ನು ನಿಮ್ಹತ್ರ ಹಂಚ್ಕೊತಿನಿ.
ಬರುವ ಮೇ ತಿಂಗಳಲ್ಲಿ, ಮತ್ತೆರೆಡು ಸೆಮಿನಾರ್ ಬೇರೆ ಇದೆ, ಕೆಲವು ದಿನಗಳಿಂದ ಡೈರಿಯಲ್ಲಿ ಗೀಚಿರುವ ಸಾಲುಗಳು ಹಾಗೆ ಬೆಚ್ಚಗೆ ಮಲಗಿವೆ, ಸಮಯ ಸಿಕ್ಕಾಗ ಇಲ್ಲಿಗೆ ಬಟ್ಟಿ ಇಳಿಸುತ್ತೇನೆ. ಅದೆಲ್ಲಕ್ಕಿಂತ ಮುಖ್ಯವಾಗಿ ನಾಳೆ ನನ್ನ ನಾಲ್ಕು ದಿನದ ಆಸ್ಟ್ರಿಯಾ ಟ್ರಿಪ್ ಗೆ ಹೊರಡುತ್ತಿದ್ದೀನಿ, ಮೊದಲ ಸಾರಿ ಆ ದೇಶಕ್ಕೆ ಪ್ರಯಾಣ, ಅದಲ್ಲದೆ ಸುಮಾರು ನಾಲ್ಕು ವರ್ಷಗಳ ನಂತರ ಸ್ನೇಹಿತ ವಿನಯ್ ನ ನೋಡ್ತೀನಿ........ ಇದೆಲ್ಲಾ ಸೇರಿ ಒಂದು ಚಿಕ್ಕ excitement.
ಪ್ರಯಾಣ ಯಾಕೋ ಸ್ವಲ್ಪ ಕಸ್ಟ ಅನಿಸ್ತಾ ಇದೆ, ಆದರೆ ಒಂದೇ ವಾರದಲ್ಲಿ ಎರಡು ದೇಶ ಸುತ್ತೋ ಬಾಗ್ಯ, ಜೊತೆಗೆ ಬರುವಾಗ ಕ್ಯಾಮರಾ ತುಂಬಾ ಫೋಟೋಗಳು, ಮನಸ್ಸಿನ ತುಂಬ ನೆನಪುಗಳು..... any risk will be worth of it.
ಹಾಲು, ಕೋಕ್ ಮತ್ತು economics
ಈ ದರಿದ್ರ sunday ಗಳ ಹಣೆಬರನೆ ಇಸ್ಟು, ದಿನಪೂರ್ತಿ ಸೋಮಾರಿತನ, ಆಮೇಲೆ ರಾತ್ರಿ ಅಡಿಗೆ ಮಾಡೋ ಯೋಚನೆ ಬೇರೆ, ಮೊನ್ನೆ ಹಾಗೆ ಅಡಿಗೆ ಮಾಡೋಕೆ ಬೇಜಾರಾಗಿ, ಪಿಜ್ಜಾ ತಿನ್ನೋದು ಅಂತ ಡಿಸೈಡ್ ಆಯ್ತು. ಸರಿ ಅಂತ ಒಂದು pizza ಎತ್ಕಂಡು ಹಾಗೆ ಪಕದಲ್ಲಿರೋ supermarket ಹೋಗಿ ಒಂದು ಲೀಟರ್ ಕೋಕ್ ತಗಂಡು ಬಿಲ್ಲ್ಲ್ ಕೊಡಣ ಅಂತ ಪರ್ಸು ನಲ್ಲಿ 250 forint (ಸುಮಾರಾಗಿ 50 ರೂ ಲೆಕ್ಕ) ಚೇಂಜ್ ಹುಡುಕಬೇಕಾದ್ರೆ ಯಾಕೋ ಹತ್ತು ವರ್ಷಗಳ ಹಿಂದೆ ದಿನಾ ಬೆಳ್ಳಿಗೆ ಅರ್ಧ ಲೀಟರ್ ಹಾಲಿಗೆ 5 ರೂ ಜೊತೆ 25 ಪೈಸೆ ಹುಡುಕುತಿದ್ದ ಅಮ್ಮನ ಕೈ ನೆನಪಾಯಿತು. ಬರೀ ಹತ್ತು ವರ್ಷದಲ್ಲಿ ಎಸ್ಟು ಬದಲಾವಣೆ ಅಲ್ವಾ!!!
ಇದೇ ಏನಪ್ಪಾ "Economy growth" ಅಂದ್ರೆ!!
ಗೆಳತಿಯ ನಕ್ಷತ್ರ ಮತ್ತು ಪೋಲಿ ಜೋಕ್
ಇನ್ನೇನು ದಿಂಬಿಗೆ ತಲೆ ಹಾಕಿ ನಿದ್ದೆಗೆ ಶರಣಾಗಬೇಕು ಅನ್ನುವಷ್ಟರಲ್ಲಿ ಗೆಳತಿಯ SMS
" ಲೋ ಎಲ್ಲೋ ನಿನ್ನ ನಕ್ಷತ್ರನೆ ಕಾಣಿಸ್ತ ಇಲ್ಲ? ನನ್ನ ನಕ್ಷತ್ರ ಒಂದೇ ಹೊಳಿತ ಇದೆ ನೋಡು ಪಾಪಾ !!! ಎಲ್ಲೋ ಬಚ್ಚಿಟ್ಟಿದಿಯಾ", ತಣ್ಣನೆ ಗಾಳಿ ಸವಿಯುತ್ತಾ ನಕ್ಷತ್ರಗಳನೆಲ್ಲ ಎಣಿಸುತ್ತ ಇದು ನೋಡು ನನ್ನದು.... ಅದು ನಿನ್ನದು ಎಂದು ಕಳಿಯುತ್ತಿದ ಮದುರ ಸಂಜೆಗಳ ನೆನಪಾಗಿ ಇನ್ನೇನು Flashback ಗೆ ಜಾರಬೇಕು ಅನ್ನುವಷ್ಟರಲ್ಲಿ
"ಯಾರದ್ರಿ ಮೆಸೇಜ್ ಈ ಟೈಮ್ನಲ್ಲಿ" ಹೆಂಡತಿಯ ಪ್ರಶ್ನೆ .
"ಹೇ ನಮ್ಮ ಪ್ರಶಾಂತಂದು .... ಮಾಮೂಲು ಪೋಲಿ ಜೋಕ್ " ಅಂದ.
ಅವಳ ಕಣ್ಣಿಗೆ ಆ ನಕ್ಷತ್ರ ಕಾಣಲಿಲ್ಲ, ಇವನ ಕಣ್ಣಿಗೆ ನಿದ್ದೆ ಹತ್ತಲಿಲ್ಲ.
